ಟರ್ಬೋ ಊದುಕೊಳವೆ -
ಆವಿಚಾಲಿತ ಇಲ್ಲವೇ ಇಂಧನಚಾಲಿತ ಇಲ್ಲವೇ ವಿದ್ಯುಚ್ಚಾಲಿತ ತಿರುಬಾನಿಯಿಂದ ಕಡಿಮೆ ಒತ್ತಡದ ವಾಯುವಿಗೆ ಅಧಿಕ ಒತ್ತಡ ನೀಡಿ ಇಚ್ಛಿತ ಸ್ಥಳಕ್ಕೆ ರವಾನಿಸುವ ಸಾಧನ (ಟರ್ಬೋ ಬ್ಲೋಯರ್). ವಾಯುವನ್ನು ಕಡಿಮೆ ಒತ್ತಡದಿಂದ ಹೆಚ್ಚು ಒತ್ತಡದ ಸ್ಥಳಕ್ಕೆ ರವಾನಿಸುವ ಅಥವಾ ವಾಯುವಿನ ಒತ್ತಡ ಹೆಚ್ಚಿಸಬಲ್ಲ ಸಾಧನಗಳಲ್ಲಿ ಮೂರು ವಿಧ: 1 ಹೆಚ್ಚು ಒತ್ತಡವನ್ನು ಉಂಟುಮಾಡದೆ ಕೇವಲ ವಾಯುವನ್ನು ಪ್ರಸರಿಸುವ ಪಂಖಗಳು (ಇವುಗಳಿಂದ ಒದಗುವ ಒತ್ತಡ ಚದರ ಅಂಗುಲಕ್ಕೆ ಒಂದು ಪೌಂಡಿಗಿಂತಲೂ ಕಡಿಮೆ); 2 ಚದರ ಅಂಗುಲಕ್ಕೆ ಒಂದರಿಂದ ಮೂವತ್ತೈದು ಪೌಂಡುಗಳಷ್ಟು ಒತ್ತಡವನ್ನು ಉಂಟುಮಾಡುವ ಊದುಕೊಳವೆಗಳು; 3 ಮೂವತ್ತೈದಕ್ಕೆ ಮೀರಿ ಒತ್ತಡನೀಡಬಲ್ಲ ಸಂಪೀಡಕಗಳು (ಕಂಪ್ರೆಸರ್ಸ್). ಊದುಕೊಳವೆಗಳನ್ನು ನಡೆಸಲು ವಿದ್ಯುತ್ ಮೋಟರ್, ಅಂತರ್ದಹನ ಎಂಜಿನ್, ಆವಿ ಅಥವಾ ಇಂಧನ ತಿರುಬಾನಿಗಳನ್ನು ಬಳಸುತ್ತಾರೆ. ತಿರುಬಾನಿಯಿಂದ ಚಾಲಿತವಾದ ಊದುಕೊಳವೆಗಳು ಉಳಿದವುಗಳಿಗಿಂತ ಹೆಚ್ಚು ವೇಗದಲ್ಲಿ ಓಡುತ್ತವೆ. ಅವುಗಳ ಅಶ್ವಸಾಮಥ್ರ್ಯವೂ ಹೆಚ್ಚು. ಟರ್ಬೋ ಊದುಕೊಳವೆಗಳ ಬಳಕೆ ವಿಶೇಷವಾಗಿ ಕಬ್ಬಿಣ ಕರಗಿಸುವ ಬ್ಲಾಸ್ಟ್ ಕುಲುಮೆಗಳಲ್ಲೂ ಬೆಸೆಮರ್ ಕುಲುಮೆಗಳಲ್ಲೂ ಉಂಟು. ವಿಮಾನಗಳಿಗೆ ಅತ್ಯಾಪೀಶೀಕರಿಸುವಲ್ಲಿಯೂ (ಸೂಪರ್‍ಚಾರ್ಜ್) ಟರ್ಬೋ ಊದುಕೊಳವೆಗಳ ಉಪಯೋಗ ಇದೆ.
		(ಎ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ